ಕೆಲ್ಸನ್, ಹ್ಯಾನ್ಸ್
ನ್ಯಾಯಶಾಸ್ತ್ರ ಪಂಡಿತ. ಶುದ್ಧ ನ್ಯಾಯತತ್ತ್ವದ ಜನಕ, 1881ರ ಅಕ್ಟೋಬರ್ 11ರಂದು ಪ್ರಾಣ್ ನಗರದಲ್ಲಿ ಜನಿಸಿದ. ಹೈಡಲ್ ಬರ್ಗ್, ಬರ್ಲಿನ್ ಮತ್ತು ವಿಯೆನ್ನಗಳಲ್ಲಿ ಇವನ ವಿದ್ಯಾಭ್ಯಾಸ ನಡೆಯಿತು. ಆಸ್ಟ್ರಿಯ ದೇಶದ 1920ರ ಸಂವಿಧಾನವನ್ನು ರಚಿಸಿದವನೀತ. ಆಧುನಿಕ ಕಾಲದ ನ್ಯಾಯಶಾಸ್ತ್ರಜ್ಞರಲ್ಲಿ ಪ್ರಮುಖ. ಆಸ್ಟ್ರಿಯದ ಪರಮೋಚ್ಚ ಸಂವಿಧಾನ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಯಾಗಿದ್ದ (1920-30). ಸುಮಾರು 30 ವರ್ಷಗಳ ಕಾಲ ವಿಯೆನ್ನ, ಕೊಲೋನ್, ಜಿನೀವ ಮತ್ತು ಪ್ರಾಗ್‍ಗಳಲ್ಲಿ ಪ್ರಾಧ್ಯಾಪಕನಾಗಿದ್ದ. 1940ರಲ್ಲಿ ಅಮೆರಿಕದಲ್ಲಿ ನೆಲಸಿ, ಹಾರ್ವರ್ಡ್, ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯ ಮತ್ತು ನೌಕಾಯುದ್ಧ ಕಾಲೇಜುಗಳಲ್ಲಿ ಬೋಧಿಸಿದ. ಹ್ಯಾನ್ಸ್ ಕೆಲ್ಸನ್ ತಾರುಣ್ಯದಲ್ಲೆ ಬರೆವಣಿಗೆಯನ್ನಾರಂಭಿಸಿದ. ಈತನ ಪ್ರಥಮ ಬೃಹತ್ ಕೃತಿ ಪ್ರಕಟವಾದ್ದು 1911ರಲ್ಲಿ. ಸುಮಾರು 60 ವರ್ಷಗಳಿಗೂ ಮೀರಿದ ಕಾಲದಲ್ಲಿ 40ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ. ಕೆಲ್ಸನನ ಹಲವು ಕೃತಿಗಳು ವಿಶ್ವದ ಅನೇಕ ಭಾಷೆಗಳಿಗೆ ಅನುವಾದವಾಗಿವೆ.

ಕೆಲ್ಸನ್ ಆರಂಭದಲ್ಲಿ ಕಾನೂನು ಮತ್ತು ರಾಜ್ಯ ಇವುಗಳ ಬಗ್ಗೆಯೂ, ನ್ಯಾಯಶಾಸ್ತ್ರದ ವ್ಯಾಪ್ತಿಯನ್ನು ಕುರಿತೂ ಬರೆದ. ಅನಂತರದಲ್ಲಿ ಪ್ರಜಾಪ್ರಭುತ್ವ, ಸಂಸದೇಯ ಸರ್ಕಾರ, ಸಮಾಜವಾದ ಮತ್ತು ಸಾಮ್ಯವಾದ ಇವನ್ನು ಕುರಿತುಗ್ರಂಥಗಳನ್ನು ರಚಿಸಿದ. ಪ್ಲೇಟೋ ಮತ್ತು ಅರಿಸ್ಟಾಟಲರ ಕೃತಿಗಳ ಅಭ್ಯಾಸ ಮಾಡಿದ. ಕೆಲ್ಸನ್ ತನ್ನ ಗ್ರಂಥಗಳಲ್ಲಿ ಅವರ ವಿಚಾರಧಾರೆಯ ಆಳವಾದ ವಿವೇಚನೆ ನಡೆಸಿದ್ದಾನೆ. ನ್ಯಾಯಶಾಸ್ತ್ರಕ್ಕೆ ಈತನ ವಿಶಿಷ್ಟ ಕೊಡುಗೆಗಳೆಂದರೆ ನ್ಯಾಯಸೂತ್ರಗಳ ಸ್ಪಷ್ಟೀಕರಣ, ಸಂಯುಕ್ತ ರಾಷ್ಟ್ರಸಂಸ್ಥೆಯನ್ನು ಕುರಿತ ಗ್ರಂಥ ಮತ್ತು ಅಂತರ ರಾಷ್ಟ್ರೀಯ ಕಾನೂನು. ಕಾಂಟನ ನ್ಯಾಯಿಕ ಸಿದ್ಧಾಂತಗಳು ಇವನಿಗೆ ಸ್ಫೂರ್ತಿ ನೀಡಿ ಇವನ ವೈಚಾರಿಕ ಮಂಥನಕ್ಕೆ ಮೂಲ ಸಾಮಗ್ರಿಯಾಗಿ ಪರಿಣಮಿಸಿದುವು. ಆದರೂ ಈತನ ಸಿದ್ಧಾಂತಗಳು ತೀರ ಭಿನ್ನವಾಗಿವೆ. ಸಿಗ್‍ಮಂಡ್ ಫ್ರಾಯ್ಡನ ಪ್ರಭಾವದ ಫಲವಾಗಿ ಮನಶ್ಯಾಸ್ತ್ರ ಮತ್ತು ಸಮಾಜಶಾಸ್ತ್ರಗಳಿಗೆ ಇರುವ ಸಂಬಂಧವನ್ನು ಕಂಡುಕೊಂಡು, ನ್ಯಾಯಸೂತ್ರಗಳ ಮೂಲಭೂತ ಪರಿಕಲ್ಪನೆಗಳಿಗೆ ಅವನ್ನು ಹೊಂದಿಸಿದ್ದಾನೆ. ಧರ್ಮವೂ ಧರ್ಮಗ್ರಂಥಗಳೂ ಅವನ ಅಭಿಪ್ರಾಯಗಳ ಮೇಲೆ ಪ್ರಭಾವ ಬೀರಿರುವುದನ್ನು ಅವನ ಲೇಖನಗಳಲ್ಲಿ ಕಾಣಬಹುದು.

ಕಾನೂನು ಎಂಬ ಶಬ್ದದ ವ್ಯಾಖ್ಯೆಯನ್ನು ಕುರಿತು ಚಿಂತನ ಮಾಡಿದ ಪ್ರಮುಖರಲ್ಲಿ ಕೆಲ್ಸನನೂ ಒಬ್ಬ. ರಾಜಕೀಯ ಪ್ರಭುತ್ವ ತನ್ನ ಪ್ರಜಾಕೋಟಿಗೆ ವಿಧಿಸಿದ ಆದೇಶವೇ ಕಾನೂನು ಎಂಬ ವ್ಯಾಖ್ಯೆಯನ್ನು ಕೆಲ್ಸನ್ ಒಪ್ಪುವುದಿಲ್ಲ. ಎಲ್ಲ ರೀತಿಯ ನ್ಯಾಯಿಕ ವ್ಯವಸ್ಥೆಗಳಿಗೂ ಎಲ್ಲ ಕಾಲಕ್ಕೂ ಸರ್ವಪ್ರದೇಶಗಳಿಗೂ ಮಾನವನ ಅಭಿವೃದ್ಧಿಯ ಎಲ್ಲ ಹಂತಗಳಿಗೂ ಸರಿಹೊಂದುವಂತೆ ಕಾನೂನಿನ ವ್ಯಾಖ್ಯೆಯೊಂದನ್ನು ರೂಪಿಸಲು ಈತ ಪ್ರಯತ್ನಿಸಿದ. ಪ್ರಜಾಪ್ರಭುತ್ವವಾದಿಯ ಕಾನೂನಿನ ವ್ಯಾಖ್ಯೆ ಒಬ್ಬ ಕಮ್ಯುನಿಸ್ಟ್ ನೀಡುವ ವ್ಯಾಖ್ಯೆಗಿಂತ ಭಿನ್ನವಾಗಿರುವುದು ಸಹಜ. ಒಬ್ಬನ ಮೇರೆಗೆ ವ್ಯಕ್ತಿಸ್ವಾತಂತ್ರ್ಯ ನ್ಯಾಯಿಕ ವ್ಯವಸ್ಥೆಯ ಮುಖ್ಯ ಲಕ್ಷಣವಾದರೆ, ಮತ್ತೊಬ್ಬನ ಮೇರೆಗೆ ಉತ್ಪಾದನೆಗೆ ಅನುಕೂಲವಾಗುವ ಯಾವುದೇ ಆಸ್ತಿ ವ್ಯಕ್ತಿಗತ ಸ್ವಾಮ್ಯದಲ್ಲಿ ಉಳಿಯದಂತೆ ನಿಷೇಧಿಸುವುದೇ ಮುಖ್ಯ ಲಕ್ಷಣವಾಗಬಹುದು. ಕಾನೂನಿನಲ್ಲಿ ವಿವೇಚನೆಗಿಂತ ಅಥವಾ ಯುಕ್ತಾಯುಕ್ತತೆಯ ಪ್ರಜ್ಞೆಗಿಂತ ಕ್ರಿಯೆಯನ್ನು ನಿಯಂತ್ರಣಗೊಳಿಸುವ ಗುರಿಯೇ ಮುಖ್ಯಘಟಕವೆಂಬುದು ಅವನ ಅಭಿಪ್ರಾಯ. ಮಾನವನ ನಡೆವಳಿಯನ್ನು ನಿಯಂತ್ರಿಸುವ ಬಲಾತ್ಕಾರ ರೂಪದ ಆದೇಶ-ಎಂಬುದಾಗಿ ಕಾನೂನಿನ ಬಗ್ಗೆ ರೂಪಿಸಲಾಗಿರುವ ವ್ಯಾಖ್ಯೆಗೆ ಈ ಅಭಿಪ್ರಾಯವೇ ಹಿನ್ನೆಲೆಯಾಗಿದೆ. ರಾಜಕೀಯ ಧೋರಣೆಗಳ, ಸಾಮಾಜಿಕ ಹಿನ್ನೆಲೆಗಳ, ಕಾಲಗತಿಗಳ ಮತ್ತು ಪ್ರಾದೇಶಿಕ ಪ್ರಭಾವಗಳ ಕೈಗೊಂಬೆಯೆನಿಸದಿರುವಂಥ ಕಾನೂನುವ್ಯಾಖ್ಯೆಯನ್ನು ಈತ ಕಂಡುಹಿಡಿದಿದ್ದಾನೆ.

ನ್ಯಾಯಿಕ ಕಲ್ಪನೆಗಳ ದ್ವೈತ ರೂಪಗಳು ರೂಢಿಗತವಾಗಿವೆ ಎಂಬುದು ಈತನ ಅಭಿಪ್ರಾಯ. ರಾಜ್ಯ, ಕಾನೂನು ಇವು ಬೇರೆಬೇರೆ ಎಂಬ ಅಭಿಪ್ರಾಯಕ್ಕೆ ದ್ವಿತ್ವದ ಈ ತಪ್ಪು ಕಲ್ಪನೆಯೇ ಕಾರಣವಾಗಿದೆ ಎನ್ನುವುದು ಕೆಲ್ಸನನ ಮತ. ಒಂದು ನ್ಯಾಯಿಕ ವ್ಯವಸ್ಥೆಯಲ್ಲಿ ಕಾನೂನನ್ನು ರೂಪಿಸುವ, ಅದನ್ನು ಪ್ರಕಟಿಸುವ ಹಾಗೂ ಆಚರಣೆಯಲ್ಲಿ ತರುವ ಸಾಧನಗಳ ಸ್ವಯಂಪರಿಪೂರ್ಣತೆ ಕಂಡುಬಂದಾಗ ಅದೇ ರಾಜ್ಯವಾಗಿ ಪರಿಣಮಿಸುತ್ತದೆ. ಹೀಗೆ ವ್ಯಕ್ತಿ ಮತ್ತು ವಿಧಿಬದ್ಧವ್ಯಕ್ತಿ, ಕಾನೂನು ರಚನೆ ಮತ್ತು ನ್ಯಾಯ ನಿರ್ಣಯ, ಸರ್ಕಾರಿ ಮತ್ತು ಖಾಸಗಿ ಕಾನೂನುಗಳು-ಇವುಗಳ ನಡುವೆ ವಿಶೇಷ ವ್ಯತ್ಯಾಸ ಇಲ್ಲವೆಂದು ಈತ ವಾದಿಸಿದ್ದಾನೆ.

ಅಂತರರಾಷ್ಟ್ರೀಯ ಕಾನೂನಿನ ಬಗ್ಗೆ ಕೆಲ್ಸನನ ಅಭಿಪ್ರಾಯಗಳು ವಿಶ್ವದ ನ್ಯಾಯಿಕ ಒಕ್ಕಟ್ಟಿನ ಆದರ್ಶದ ತಳಹದಿಯ ಮೇಲೆ ರೂಪಿತವಾಗಿವೆ. ನ್ಯಾಯ ಶಾಂತಯನ್ನು ದೊರಕಿಸಿ ಕೊಡಬಲ್ಲದು. ವಿಶ್ವದ ಉಳಿವು. ಸಮಾಜದ ಪ್ರಗತಿ ಮತ್ತು ವ್ಯಕ್ತಿಯ ದೊರಕಿಸಿ ಕೊಡಬಲ್ಲದು. ವಿಶ್ವದ ಉಳಿವು. ಸಮಾಜದ ಪ್ರಗತಿ ಮತ್ತು ವ್ಯಕ್ತಿಯ ವಿಕಾಸಕ್ಕೆ ಶಾಂತಿ ಮೂಲಾಧಾರ. ಆದ್ದರಿಂದ ನ್ಯಾಯವನ್ನು ಸಾಪೇಕ್ಷತಗೊಳಿಸಬೇಕು. ಹಿತಾಸಕ್ತಿಗಳಿಂದ ಉದ್ಭವಿಸುವ ವಿವಾದಗಳಲ್ಲಿ ಸಾಪೇಕ್ಷ ಮೌಲ್ಯಗಳ ಆಧಾರದ ಮೇಲೆ ರಾಜಿಮಾಡಿಕೊಳ್ಳುವುದರ ಮೂಲಕ ಶಾಂತಿ ನೆಲೆಗೊಳ್ಳುವಂತೆ ಮಾಡುವುದು ವಿಹಿತ. ಇದು ಕೆಲ್ಸನನ ಅಭಿಪ್ರಾಯ.
ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ರಾಜನೀತಿಶಾಸ್ತ್ರ ಪ್ರಾಧ್ಯಾಪಕ ಹುದ್ದೆಯಿಂದ ಕೆಲ್ಸನ್ 1952ರಲ್ಲಿ ನಿವೃತ್ತಿ ಹೊಂದಿದಾಗ ಏರ್ಪಡಿಸಿದ್ದ ಗೌರವಕೂಟದಲ್ಲಿ ನ್ಯಾಯವನ್ನು ಕುರಿತು ಆತ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ. ಆ ಸಮಯದಲ್ಲಿ ನ್ಯಾಯವೆಂದರೇನು-ಎಂಬ ಪ್ರಶ್ನೆಯನ್ನು ಕೇಳಿ, ಆ ಪ್ರಶ್ನೆಗೆ, ನಿರಾತಂಕವಾಗಿ ಸತ್ಯಾನ್ವೇಷಣೆ ನಡೆಯಲು ರಕ್ಷಾಕವಚವಾಗುವ ಸಾಮಾಜಿಕ ವ್ಯವಸ್ಥೆಯೇ ನ್ಯಾಯ ಎಂದು ಉತ್ತರಹೇಳಿದ. ಅವನ ದೃಷ್ಟಿಯಲ್ಲಿ ನ್ಯಾಯವೆಂದರೆ ಸ್ವಾತಂತ್ರ್ಯದ ನ್ಯಾಯ, ಶಾಂತಿಯ ನ್ಯಾಯ, ಪ್ರಜಾಪ್ರಭುತ್ವದ ನ್ಯಾಯ, ಪರಮಸಹಿಷ್ಣುತೆಯ ನ್ಯಾಯ.				  	
	 (ಎಲ್.ಎಸ್.ಜೆ.)